ಶಿಶುನಾಳ ಶರೀಫ್
	1819-89. ಹೊಸಗನ್ನಡ ಅರುಣೋದಯ ಸಾಹಿತ್ಯದ ಮುಂಬೆಳಗಿನ ಕಾಲದಲ್ಲಿ ತಮ್ಮ ಅನುಭಾವಕಾವ್ಯದ ಹೊಂಗಿರಣವೊಂದನ್ನು ಹಾಯಿಸಿದ ಪ್ರಸಿದ್ಧ ಅನುಭಾವಿ ಕವಿ. ಇವರ ಮೊದಲಿನ ಹೆಸರು ಮಹಮ್ಮದ್ ಶರೀಫ್. ಶಿಗ್ಗಾವಿ ತಾಲ್ಲೂಕಿನ ಶಿಶುವಿನಾಳ ಇವರ ಜನ್ಮಸ್ಥಳ. 1819 ಮಾರ್ಚ್ 7 ರಂದು ಜನಿಸಿದರು. ಕನ್ನಡ ಮುಲ್ಕೀ ಪರೀಕ್ಷೆಯವರೆಗೆ ಓದಿದ ಇವರು, ಆರಂಭದಲ್ಲಿ ಕೆಲಕಾಲ ಹಳ್ಳಿಯ ಶಾಲೆಯೊಂದರಲ್ಲಿ ಶಿಕ್ಷಕರಾಗಿದ್ದರಾದರೂ ಬೇಗನೆ ಅದರ ಹಂಗು ಹರಿದುಕೊಂಡು ಆಧ್ಯಾತ್ಮಸಾಧನೆಗೆ ತಮ್ಮನ್ನು ಸಮರ್ಪಿಸಿ ಕೊಂಡರು. 

	ಅಭಿಜಾತ ಕಲಾವಿದರಾಗಿದ್ದ ಶಿಶುನಾಳರು ಚಿಕ್ಕಂದಿನಲ್ಲಿಯೇ ಹಳ್ಳಿಯ ಜಾತ್ರೆ ಉತ್ಸವಗಳಲ್ಲಿ ಶರಣರ ವಚನಗಳನ್ನೂ ಅನುಭಾವ ಪದಗಳನ್ನೂ ಹಾಡುತ್ತ, ಬಹುರೂಪಿಗಳ ಹಾಗೆ ವಿವಿಧ ವೇಷ ಹಾಕುತ್ತ, ಬಗೆಬಗೆಯ ಬಯಲಾಟಗಳಲ್ಲಿ ಪಾತ್ರವಹಿಸುತ್ತ ತಮ್ಮ ಕಲೆಗಾರಿಕೆಯನ್ನು ಜನಮನದ ವಿಲಾಸ-ವಿಕಾಸಗಳಿಗೆ ಮುಡಿಪಿಡಲು ಮೊದಲುಮಾಡಿದರು. ಮೊಹರಂ ಪರ್ವ ಸಮಯದಲ್ಲಿ ತಲೆ ಎತ್ತುವ ಕರ್ಬಲಾ ಮೇಳಗಳಿಗಾಗಿ ರಿವಾಯತ್ ಪದ ರಚಿಸಿಕೊಟ್ಟರು, ಲಾವಣಿಗಳನ್ನೂ ಬರೆದರು. ಹೀಗೆ ನಿಧಾನವಾಗಿ ಸಾಹಿತ್ಯಪಥದಲ್ಲಿ ತಮ್ಮ ಹೆಜ್ಜೆ ಮೂಡಿಸಿ, ಮುಂದಿನ ಸೃಷ್ಟಿಗೆ ಅಗತ್ಯ ವಾದ ಪೂರ್ವಸಿದ್ಧತೆ ಮಾಡಿಕೊಂಡರು. ಕಳಸದ ಗುರುಗೋವಿಂದ ಭಟ್ಟರು, ಅಂಕಲಗಿಯ ಅಡವಿ ಸ್ವಾಮಿಗಳು, ಗರಗದ ಮಡಿವಾಳಪ್ಪ ನವರು, ನವಿಲುಗುಂದದ ನಾಗಲಿಂಗಪ್ಪನವರು, ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿಗಳು ಮುಂತಾದ ಸಮಕಾಲೀನ ಸಾಧುಸತ್ಪುರುಷರ ಸಾನ್ನಿಧ್ಯ, ಸಂಸರ್ಗಗಳಿಂದ ಅನುಭಾವಿಯಾಗಿ ಮಾಗಿದರು. 

	ಕನ್ನಡ ಸಂಸ್ಕøತಿಯ ಸರ್ವಧರ್ಮಸಹಿಷ್ಣುಭಾವ ಮತ್ತು ಆಧ್ಯಾತ್ಮಿಕ ಪರಂಪರೆಯ ಸರ್ವಸಮನ್ವಯ ಅನುಭಾವ ಸಂಪತ್ತನ್ನು ಅರಗಿಸಿಕೊಂಡು ಇವರು ರಚಿಸಿದ ಅನುಭವ ಪದಗಳು ಆಪ್ತವಾದ ಕಳಕಳಿಗೆ ನೆಲೆ ಯಾಗಿವೆ. ಹಳ್ಳಿಯ ಬಾಳಿನ ದಿನದಿನದ ಬದುಕಿನಲ್ಲಿ ತಮ್ಮ ಕಣ್ಮನಗಳನ್ನು ಸೆಳೆದ ಒಂದೊಂದು ಸನ್ನಿವೇಶ-ಸಂಗತಿ, ವಸ್ತು-ವ್ಯಕ್ತಿ, ಪಶು-ಪಕ್ಷಿ ಮೊದಲಾದವುಗಳನ್ನೇ ಒಂದು ರೂಪಕವನ್ನಾಗಿಯೋ ದೃಷ್ಟಾಂತವ ನ್ನಾಗಿಯೋ ಪ್ರತಿಮೆಯನ್ನಾಗಿಯೋ ಮಾಡಿಕೊಂಡು ಅವುಗಳಲ್ಲಿ ತಮ್ಮ ಅನುಭವದ ಬೆಳಕು ಮತ್ತು ಅನುಭಾವದ ಬೆಳಗನ್ನು ವರ್ಣಮಯವಾಗಿ ಹೇಳಿದ್ದಾರೆ. ತಮ್ಮ ಜೀವಮಾನದುದ್ದಕ್ಕೂ ಇವರು ಬರೆದ ಹಾಡು, ಒರೆದ ಪಾಡು ಒಂದೇ ಆಗಿದೆ. ಬೋಧ ಒಂದೇ, ಬ್ರಹ್ಮನಾದ ಒಂದೇ ಎಂಬುದು ಅವರ ಬೀಜಮಂತ್ರವಾಗಿದ್ದು ನಡಿಯೊ ದೇವರ ಚಾಕರಿಗೆ, ಮುಕ್ತಿಗೊಡೆಯ ಖಾದರ ಲಿಂಗ ನೆಲಸಿರ್ಪ ಗಿರಿಗೆ ಎಂಬುದು ಇವರು ತಮ್ಮ ಮನಕ್ಕೂ ಜನಕ್ಕೂ ಕೊಟ್ಟ ಜೀವಾಳದ ಕರೆಯಾಗಿದೆ. ಇವರ ದೃಷ್ಟಿಯಲ್ಲಿ ಸನಾತನ ವೈದಿಕ ಮತ ಎತ್ತಿಹಿಡಿಯುವ ಬ್ರಹ್ಮತತ್ತ್ವ, ತಮ್ಮ ಪರಿಸರದಲ್ಲಿ ಪ್ರಭಾವಕಾರಿಯಾಗಿದ್ದ ವೀರಶೈವ ಮತದ ಲಿಂಗತತ್ತ್ವ ಹಾಗೂ ತಮ್ಮ ಮನೆತನಕ್ಕೆ ಪೂಜ್ಯವಾಗಿದ್ದ ಹುಲಗೂರ ಖಾದರಶಾ ಸಾಧುವಿನ ಸಮಾಧಿತತ್ತ್ವ-ಇವೆಲ್ಲವೂ ಮೂಲತಃ ಒಂದೇ. ಇದರಿಂದಾಗಿ ಇವರು ಸರ್ವಧರ್ಮಸಮನ್ವಯದ ಉಜ್ಜ್ವಲ ಮೂರ್ತಿಯಾಗಿ ಹಿಂದು-ಮುಸ್ಲಿಮ್ ಬಾಂಧವ್ಯದ ಧವಲಕೀರ್ತಿಯಾಗಿ ಉತ್ತರ ಭಾರತದ ಮಹಾತ್ಮ ಕಬೀರರಂತೆ ಉತ್ತರ ಕರ್ನಾಟಕದ ಭಾಗದಲ್ಲಿ ಜನಮನದ ಗದ್ದುಗೆ ಏರಿದರು. ಇದಲ್ಲದೆ ತಮ್ಮ ಅಭಿವ್ಯಕ್ತಿಯಲ್ಲಿ ಅಳವಡಿಸಿಕೊಂಡ ಜನಪದ ಭಾಷೆಯ ಸೊಗಡು-ಗತ್ತು, ಗ್ರಾಮೀಣ ಸಂಗೀತದ ಲಯ-ಲಾಸ್ಯಗಳಿಂದಾಗಿಯೂ ಇವರು ಜನಮನವನ್ನು ಸೂರೆಗೊಂಡರು. ಹೀಗೆ ಆಧ್ಯಾತ್ಮಿಕ ಸಾಧನೆಯ ಸಿದ್ಧಿಯನ್ನು ಮುಟ್ಟಿದಮೇಲೆ ತಮ್ಮಲ್ಲಿ ಬಂದವರಿಗೆ ಧರ್ಮನೀತಿ ಬೋಧೆ ಮಾಡಲೆಂದು ಇವರು ತಮ್ಮ ಮನೆ ಹತ್ತಿರದಲ್ಲಿ ಕುಳಿತುಕೊಳ್ಳುತ್ತಿದ್ದ ಕಟ್ಟೆಯೊಂದು ಇಂದಿಗೂ ಇದ್ದು ಬೋಧಪೀಠ ಎಂಬುದಾಗಿ ಪೂಜಿಸಲ್ಪಡುತ್ತದೆ. ಇವರು 1889 ಮಾರ್ಚ್ 7ರಂದು ನಿಧನರಾದರು.

	ಸಿ.ಅಶ್ವಥ್, ಶಿವಮೊಗ್ಗ ಸುಬ್ಬಣ್ಣ, ರತ್ನಮಾಲಾ ಪ್ರಕಾಶ್ ಮೊದಲಾದ ವರು ಹಾಡಿರುವ ಶರೀಫ್ ಗೀತೆಗಳ ಧ್ವನಿಸುರುಳಿಗಳು ಕರ್ನಾಟಕದ ಮನೆಮಾತಾಗಿವೆ. ಶಿಶುನಾಳ ಶರೀಫ್‍ರ ಸಮಗ್ರ ಗೀತೆಗಳು ಪುಸ್ತಕ ರೂಪದಲ್ಲಿ ಪ್ರಕಟವಾಗಿವೆ. ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ಶರೀಫರ ಸಮಗ್ರ ಗೀತ ಸಂಕಲನವನ್ನು ಹೊರತಂದಿದ್ದಾರೆ.  

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
	
	(ಎಮ್.ಎ.ಎ.)